ಪೆನ್ನಾಟ್ಯುಲೇಸಿಯ -
	ಸೀಲೆಂಟರೇಟ ವಿಭಾಗ, ಆಂತೊಜೋವ ವರ್ಗ, ಆಲ್‍ಸಯೊನೇರಿಯ ಉಪವರ್ಗಗಳಿಗೆ ಸೇರಿದ ಒಂದು ಗಣ. ಇದು ಸುಮಾರು 13 ಕುಟುಂಬ ಮತ್ತು 31 ಜಾತಿಗಳನ್ನು ಒಳಗೊಂಡಿದೆ. ಇವೆಲ್ಲವೂ ಸಮುದ್ರವಾಸಿಗಳು. ಮುಖ್ಯವಾಗಿ ಸುಖೋಷ್ಣತೆ ಮತ್ತು ಮೆದುವಾದ ತಳವಿರುವ ಸಮುದ್ರ ತೀರಗಳಲ್ಲಿ ವಾಸಿಸುತ್ತವೆ. ಇವು ಮೃದುವಾದ ಸಮೂಹಜೀವಿಗಳು. ದೇಹದ ಉದ್ದ ಸಾಮಾನ್ಯವಾಗಿ 5-60 ಸೆಂ.ಮೀ. ಕೆಲವು 1 ಮೀಟರ್ ಉದ್ದವಿರುವುದೂ ಉಂಟು. ಸಾಮಾನ್ಯವಾಗಿ ದೇಹದ ಬಣ್ಣ ಹಳದಿ, ಕಿತ್ತಳೆ, ಕೆಂಪು ಅಥವಾ ಊದಾ. ಲೀಪೊಕ್ರೋಮ್ ವರ್ಣದ್ರವ್ಯವೇ ದೇಹದ ಬಣ್ಣಕ್ಕೆ ಕಾರಣ. 

	ಈ ಗುಂಪಿನ ಪ್ರಾಣಿಗಳ ದೇಹದಲ್ಲಿ ತೊಟ್ಟು (ಪಿಡಂಕಲ್) ಮತ್ತು ರೇಕಿಸ್ ಎಂಬ ಎರಡು ಮುಖ್ಯಭಾಗಗಳುಂಟು. ತೊಟ್ಟು ಮರಳು ಇಲ್ಲವೆ ಕೆಸರಿನಲ್ಲಿ ಹುದುಗಿರುತ್ತವೆ. ರೇಕಿಸ್ ಎಂಬುದು ಪ್ರಥಮ ಪಾಲಿಪ್ ಇಲ್ಲವೆ ಅಕ್ಷೀಯ ಪಾಲಿಪ್. ಇದರ ಅಕ್ಕಪಕ್ಕಗಳಿಂದ ಹಲವಾರು ದ್ವಿತೀಯಕ ಪಾಲಿಪ್‍ಗಳು ಹುಟ್ಟುತ್ತವೆ. ಇವುಗಳಿಂದಾಗಿ ಇಡೀ ದೇಹ ಒಂದು ತೆರನ ಗರಿಲೇಖನಿಯಂತೆ ಗೋಚರಿಸುತ್ತದೆ. ಎಂದೇ ಪೆನ್ನಾಟ್ಯುಲೇಸಿಯ ಗಣದ ಪ್ರಾಣಿಗಳನ್ನು ಕಡಲಲೇಖನಿಗಳೆಂದು ಕರೆಯುವುದಾಗಿದೆ.

	ಈ ಪ್ರಾಣಿಗಳಲ್ಲಿ ಎರಡು ತೆರನ ಜೂóಆಯಿಡುಗಳುಂಟು: ಆಟೊಜೂóಆಯಿಡ್ ಹಾಗೂ ಸೈಫೊನೋಜೂóಆಯಿಡ್. ಮೊದಲ ಬಗೆಯವುಗಳಲ್ಲಿ ಜನನಾಂಗಗಳಿವೆಯಾದರೆ ಎರಡನೆಯವಲ್ಲಿ ಇಲ್ಲ. 

	ಪೆನ್ಯಾಟ್ಯುಲೇಸಿಯದ ಮುಖ್ಯ ಉದಾಹರಣೆಗಳು: ಪೆನ್ನಾಟ್ಯುಲ, ಕ್ಯಾವರ್‍ನ್ಯುಲೇರಿಯ, ಟೀರಾಯ್ಡಿಸ್, ವಿರ್‍ಗ್ಯುಲೇರಿಯ, ರೆನಿಲ, ಚುನೆಲ, ಅಂಬೆನ್ಯುಲ. ಇವು ಭಾರತದ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಿಗುತ್ತವೆ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ